ರಿಜಿಸ್ಟರ್ ಮ್ಯಾರೇಜ್ ಆದ ಒಂದೇ ತಿಂಗಳಲ್ಲಿ ನವ ವರನ ಆತ್ಮಹತ್ಯೆ; ನಟಿ ಸೌಮ್ಯ ಶೆಟ್ಟಿ ವಿರುದ್ಧ ಮಾವನಿಂದಲೇ ದೂರು! ಪತಿ ಸಾವಿನ ಸುತ್ತ 'ಸೌಮ್ಯ' ಕ್ರೌರ್ಯದ ಶಂಕೆ?
ಕಾರ್ಕಳ: ಅದು ಪ್ರೀತಿಯ ಪರಾಕಾಷ್ಠೆ ಎಂದು ನಂಬಿ ಹಸೆಮಣೆ ಏರಿದ್ದ ಜೋಡಿ. ಅಡೆತಡೆಗಳನ್ನ ಮೀರಿ ರಿಜಿಸ್ಟರ್ ಮ್ಯಾರೇಜ್ ಆಗಿ ಹೊಸ ಬದುಕಿನ ಕನಸು ಕಂಡಿದ್ದರು. ಆದರೆ, ಮದುವೆಯ ಸಂಭ್ರಮದ ಹೂವು ಬಾಡುವ ಮುನ್ನವೇ ನವ ವರ ವಿಷ ಸೇವಿಸಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ನಡೆದ ಈ ಘಟನೆ ಈಗ ಕರಾವಳಿಯುದ್ದಕ್ಕೂ ಸಂಚಲನ ಮೂಡಿಸಿದ್ದು, ಸಾವಿನ ಹಿಂದೆ ಸೌಮ್ಯ ರೂಪದ 'ಮಾಯಾಜಾಲ' ಅಡಗಿದೆಯೇ ಎಂಬ ಅನುಮಾನ ದಟ್ಟವಾಗಿದೆ.
ಘಟನೆಯ ಹಿನ್ನೆಲೆ: ಪ್ರೀತಿ, ಮದುವೆ ಮತ್ತು ಮೃತ್ಯು!
ನೆಲ್ಯಾಡಿ ಮೂಲದ ಶ್ರೀಮಂತ ಕುಟುಂಬದ ಸುದೀಪ್ ಶೆಟ್ಟಿ ಹಾಗೂ ಕಾರ್ಕಳದ ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಫೆಬ್ರವರಿ 17ರಂದು ಪುತ್ತೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಸುದೀಪ್ ಮನೆಯವರ ವಿರೋಧದ ನಡುವೆಯೂ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ಮತ್ತೊಮ್ಮೆ ಮಾಲೆ ಬದಲಿಸಿಕೊಂಡಿದ್ದರು. ಆದರೆ, ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿದ್ದಾರೆ ಎಂಬ ಸುದ್ದಿ ಸಿಡಿಲಿನಂತೆ ಎರಗಿದೆ. ಸತತ ಎಂಟು ದಿನಗಳ ಕಾಲ ಸಾವಿನೊಂದಿಗೆ ಹೋರಾಡಿದ ಸುದೀಪ್, ಮಾರ್ಚ್ 29ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾವನ ಗಂಭೀರ ಆರೋಪ: 'ಸೊಸೆಯೇ ಸಾವು ತಂದವಳು'
ಮಗನ ಸಾವಿನಿಂದ ಕಂಗಾಲಾಗಿರುವ ತಂದೆ ದಾಮೋದರ್ ಶೆಟ್ಟಿ, ಸೊಸೆ ಸೌಮ್ಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. "ನನ್ನ ಮಗನ ಆತ್ಮಹತ್ಯೆಗೆ ಸೌಮ್ಯಳ ಕಿರುಕುಳ ಹಾಗೂ ಪ್ರಚೋದನೆಯೇ ಕಾರಣ. ಅವಳು ಮಗನನ್ನು ಮಾನಸಿಕವಾಗಿ ಹಿಂಸಿಸಿ ಸಾವಿನ ದೂಡಿದ್ದಾಳೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಮಗನ ಆಸ್ತಿ ಮತ್ತು ಹಣದ ಮೇಲೆ ಕಣ್ಣಿಟ್ಟು ಈ ಸಂಚು ರೂಪಿಸಲಾಗಿದೆ ಎಂಬುದು ಕುಟುಂಬಸ್ಥರ ವಾದ.
ನಟಿ ಸೌಮ್ಯಳ ಮರು ವಾದ: 'ನನ್ನನ್ನು ಬಲಿಪಶು ಮಾಡಲಾಗುತ್ತಿದೆ'
ಆರೋಪದ ಸುಳಿಯಲ್ಲಿರುವ ಸೌಮ್ಯ ಶೆಟ್ಟಿ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾರೆ. "ನಾನು ಸುದೀಪ್‌ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಆತನ ಮನೆಯವರೇ ಮದುವೆಗೆ ಒಪ್ಪದೆ ಕಿರುಕುಳ ನೀಡುತ್ತಿದ್ದರು. ಸುದೀಪ್ ಲಕ್ಷಾಂತರ ರೂಪಾಯಿ ಸಾಲದಲ್ಲಿದ್ದರೂ ನಾನು ಅವನನ್ನು ಕೈಬಿಡಲಿಲ್ಲ. ಈಗ ನನ್ನ ಮೇಲೆ ಗೂಬೆ ಕೂರಿಸಲಾಗುತ್ತಿದೆ," ಎಂದು ಸೌಮ್ಯ ಪ್ರತ್ಯಾರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ವಿರುದ್ಧ ಸುಳ್ಳು ದೂರು ನೀಡಿದ ಮಾವನ ವಿರುದ್ಧ ತಾನೂ ದೂರು ನೀಡುವುದಾಗಿ ಗುಡುಗಿದ್ದಾರೆ.
ಸಾವಿನ ಸುತ್ತ ನೂರೆಂಟು ಪ್ರಶ್ನೆಗಳು!
- ವಿಷ ಸೇವಿಸಿದ್ದು ಎಲ್ಲಿ?: ನೆಲ್ಯಾಡಿಗೆ ಹೋಗಿದ್ದಾಗ ಸುದೀಪ್ ವಿಷ ಸೇವಿಸಿದ್ದಾರೆಯೇ ಅಥವಾ ಕಾರ್ಕಳಕ್ಕೆ ಬಂದ ಮೇಲೆ ಘಟನೆ ನಡೆದಿದೆಯೇ?
- ವೈದ್ಯಕೀಯ ವಿಳಂಬವೇಕೆ?: ವಿಷ ಸೇವಿಸಿದ ನಂತರವೂ ನಾಲ್ಕೈದು ದಿನ ಆಸ್ಪತ್ರೆಗೆ ಸೇರಿಸದೆ 'ಫುಡ್ ಪಾಯಿಸನ್' ಎಂದು ಸೌಮ್ಯ ಯಾಕೆ ಸುಳ್ಳು ಹೇಳಿದ್ದರು?
- ಬೆದರಿಕೆ ಕರೆಗಳು?: ನೆಲ್ಯಾಡಿಯಲ್ಲಿದ್ದಾಗ ಸೌಮ್ಯ ಅಲ್ಲಿಗೆ ಹೋಗಿ ಸುದೀಪ್‌ಗೆ ಬೆದರಿಕೆ ಹಾಕಿದ್ದು ನಿಜವೇ?
- ಹಳೆಯ ಸಂಬಂಧಗಳ ನಂಟೇನು?: ಸೌಮ್ಯಳ ಮೊದಲ ಮದುವೆ ಮತ್ತು ವಿಚ್ಛೇದನದ ಕರಾಳ ಮುಖಗಳು ಈ ಸಾವಿಗೆ ಕಾರಣವಾಯಿತೇ?
ಪೊಲೀಸ್ ತನಿಖೆಯೇ ಸುದೀಪ್ ಸಾವಿಗೆ ಉತ್ತರ!
ಸದ್ಯ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. "ಪೋಸ್ಟ್ ಮಾರ್ಟಂ ವರದಿ ಬಂದ ನಂತರ ಸುದೀಪ್ ಯಾವ ವಿಷ ಸೇವಿಸಿದ್ದರು ಮತ್ತು ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿಯಲಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು," ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಸುಂದರ ಪ್ರೇಮ ಕಥೆ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸುದೀಪ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ವ್ಯವಸ್ಥಿತವಾಗಿ ಸಾವಿನ ಬಲೆಗೆ ತಳ್ಳಲ್ಪಟ್ಟಿದ್ದಾರೋ ಎಂಬ ಸತ್ಯ ಸದ್ಯದಲ್ಲೇ ಹೊರಬರಬೇಕಿದೆ.









Comments
Leave a Comment