ಆಟವಾಡಲು ಫೋನ್ ಕೇಳಿದ ಮಗನಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ? ಉದಯನಗರದ ಮನೆಯಲ್ಲಿ ಸೂತಕದ ಛಾಯೆ; 8ನೇ ತರಗತಿ ವಿದ್ಯಾರ್ಥಿಯ ದುಡುಕಿನ ನಿರ್ಧಾರಕ್ಕೆ ಬೆಚ್ಚಿಬಿದ್ದ ಹುಬ್ಬಳ್ಳಿ.
ಹುಬ್ಬಳ್ಳಿ: ಅವನಿನ್ನೂ ಬದುಕಿನ ಹಾದಿಯನ್ನೇ ಸರಿಯಾಗಿ ಕಂಡಿರಲಿಲ್ಲ.. ತಾಯಿ ಉಣಿಸುವ ತುತ್ತು, ತಂದೆಯ ಪ್ರೀತಿಯ ಆಸರೆಯಲ್ಲೇ ಸಂಭ್ರಮಿಸಬೇಕಿದ್ದ ಹದಿನಾಲ್ಕರ ಹರೆಯದ ಆ ಬಾಲಕ, ಅದೆಲ್ಲಿಂದಲೋ ಬಂದ 'ಮೊಬೈಲ್ ಗೀಳು' ಎಂಬ ಮಾಯಾಜಾಲಕ್ಕೆ ಸಿಲುಕಿ ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಆಟವಾಡಲು ಮೊಬೈಲ್ ಕೇಳಿದಾಗ ಬುದ್ಧಿಮಾತು ಹೇಳಿದ್ದೇ ಅಪರಾಧವಾಯಿತೆಂಬಂತೆ, ಮನೆಯಂಗಳದಲ್ಲಿ ನಗು ಹರಿಸಬೇಕಿದ್ದ ಮಗ ಹೆಣವಾಗಿ ಮಲಗಿರುವುದನ್ನು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಮೊಬೈಲ್ ಎಂಬ 'ಮಹಾಮಾರಿ'ಗೆ ಬಲಿಯಾದ ಸಮರ್ಥ
ಹುಬ್ಬಳ್ಳಿಯ ಉದಯನಗರದ ನಿವಾಸಿ, 8ನೇ ತರಗತಿಯ ವಿದ್ಯಾರ್ಥಿ ಸಮರ್ಥ (14) ನೇಣಿಗೆ ಶರಣಾದ ದುರ್ದೈವಿ. ಶಾಲೆಗೆ ಹೋಗಿ ಆಟವಾಡಿ ಸಂಭ್ರಮಿಸಬೇಕಿದ್ದ ಈ ಬಾಲಕ 'ಫ್ರೀ ಫೈಯರ್' ಎಂಬ ಅಪಾಯಕಾರಿ ಗೇಮ್‌ಗೆ ದಾಸನಾಗಿದ್ದ. ನಿನ್ನೆ ರಾತ್ರಿ ಕೂಡ ಎಂದಿನಂತೆ ಮೊಬೈಲ್ ಕೇಳಿದಾಗ, ಮಗ ಮೊಬೈಲ್ ದಾಸನಾಗಬಾರದು ಎಂಬ ಕಾಳಜಿಯಿಂದ ತಾಯಿ ಒಂದಿಷ್ಟು ಬುದ್ಧಿಮಾತು ಹೇಳಿ ಗದರಿಸಿದ್ದರು. ಆದರೆ, ತಾಯಿಯ ಆ ಹಿತವಚನವೇ ಮಗನ ಪಾಲಿಗೆ ವಿಷವಾಗಿ ಪರಿಣಮಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಸೀರೆಯಲ್ಲಿ ಅಡಗಿತ್ತು ಮೃತ್ಯುಪಾಶ
ತಾಯಿಯ ಮಾತಿನಿಂದ ಮನನೊಂದ ಸಮರ್ಥ, ಒಳಗಿನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಬರಿಗೊಂಡ ಪೋಷಕರು ಬಾಗಿಲು ಒಡೆದು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರಾದರೂ, ವಿಧಿಯಾಟ ಬೇರೆಯೇ ಇತ್ತು. ಆಸ್ಪತ್ರೆ ತಲುಪುವಷ್ಟರಲ್ಲಿ ಸಮರ್ಥನ ಪ್ರಾಣಪಕ್ಷಿ ಹಾರಿಹೋಗಿತ್ತು. ಇಂದು ಕಿಮ್ಸ್ ಶವಾಗಾರದ ಮುಂದೆ ಮಗನ ಶವ ಹಿಡಿದು ಪೋಷಕರು ಮತ್ತು ಸಂಬಂಧಿಕರು ಹಾಕುತ್ತಿದ್ದ ಕಿರುಚಾಟ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು.
ಪೊಲೀಸ್ ಕಮೀಷನರ್ ಭೇಟಿ: ಪೋಷಕರಿಗೆ ಎಚ್ಚರಿಕೆ
ಘಟನಾ ಸ್ಥಳಕ್ಕೆ ಮತ್ತು ಶವಾಗಾರಕ್ಕೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಮಾಹಿತಿ ಪಡೆದು ಕಳವಳ ವ್ಯಕ್ತಪಡಿಸಿದರು. "ಮಕ್ಕಳು ಮೊಬೈಲ್ ಗೀಳಿಗೆ ಬೀಳುತ್ತಿರುವುದು ಸಮಾಜಕ್ಕೆ ಆತಂಕಕಾರಿ ವಿಚಾರ. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಮೊಬೈಲ್ ವ್ಯಸನಕ್ಕೆ ಬಿದ್ದಿರುವ ಮಕ್ಕಳನ್ನು ಪ್ರೀತಿಯಿಂದ ಅದರಿಂದ ಹೊರತರುವ ಪ್ರಯತ್ನ ಮಾಡಬೇಕು" ಎಂದು ಅವರು ಮನವಿ ಮಾಡಿದರು.
ಈ ಹೃದಯವಿದ್ರಾವಕ ಘಟನೆ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಮೊಬೈಲ್ ಎಂಬ ಅಲ್ಪ ಸುಖದ ಸಾಧನಕ್ಕಾಗಿ ತುಂಬು ಬದುಕನ್ನು ಕಳೆದುಕೊಂಡ ಬಾಲಕನ ಸಾವಿನಿಂದ ನಗರವೇ ಮಮ್ಮಲ ಮರುಗುತ್ತಿದೆ.






Comments
Leave a Comment