ಮನೆಮಂದಿಗೆ ನಿದ್ದೆ ಮಾತ್ರೆ ಹಾಕಿ 'ಆಂಟಿ' ಎಸ್ಕೇಪ್; ಬ್ಯಾಗ್ ಹಿಡಿದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಬೆಂಗಳೂರು:ರಾಜಧಾನಿಯ ಬಾಗಲಗುಂಟೆಯಲ್ಲಿ ಸಿನಿಮಾ ಮಾದರಿಯ ರೋಚಕ ಘಟನೆಯೊಂದು ನಡೆದಿದ್ದು, ‘ಕಸ ಹಾಕಿ ಬರುತ್ತೇನೆ’ ಎಂದು ಮನೆಯಿಂದ ಹೊರಬಂದ ಇಬ್ಬರು ಮಕ್ಕಳ ತಾಯಿ, ತನ್ನ ಪ್ರಿಯಕರನ ಜೊತೆ ನಾಪತ್ತೆಯಾಗಿದ್ದಾಳೆ. ಹೆಂಡತಿಯ ಈ 'ನಿಗೂಢ' ನಡೆಯಿಂದ ಕಂಗೆಟ್ಟ ಪತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಟಿಂಗ್ ಶಾಪ್ ಮಾಲೀಕನ ಜೊತೆ 'ಲಿಂಕ್':
ಬಾಗಲಗುಂಟೆಯ ನಿವಾಸಿ ಶರತ್ ಕುಮಾರ್ ಎಂಬುವವರ ಪತ್ನಿಯೇ ನಾಪತ್ತೆಯಾದ ಮಹಿಳೆ. ಪತಿ ಶರತ್ ಕೆಲಸಕ್ಕೆ ಹೋದ ಸಮಯದಲ್ಲಿ ಅದೇ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನ ಜೊತೆ ಈಕೆಗೆ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ. ಪತ್ನಿಯ ಮೊಬೈಲ್‌ಗೆ ಪ್ರಭು ರೀಚಾರ್ಜ್ ಮಾಡಿಸುತ್ತಿದ್ದ ವಿಷಯ ತಿಳಿದಾಗ ದಂಪತಿ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಪತಿ ಎಷ್ಟೇ ಬುದ್ಧಿವಾದ ಹೇಳಿದರೂ ಪತ್ನಿ ಮಾತ್ರ ತನ್ನ ಹಳೆ ಚಾಳಿ ಮುಂದುವರಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ಸಂಚು?
ಏಪ್ರಿಲ್ 11ರ ರಾತ್ರಿ ಈಕೆ ಸ್ಕೆಚ್ ಹಾಕಿ ಮನೆ ಬಿಟ್ಟಿದ್ದಾಳೆ. ಹೋಗುವ ಮುನ್ನ ಪತಿ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅವರೆಲ್ಲರೂ ಗಾಢ ನಿದ್ದೆಗೆ ಜಾರುವಂತೆ ಮಾಡಿದ್ದಾಳೆ ಎನ್ನಲಾಗಿದೆ. ರಾತ್ರಿ 11:57ರ ಸುಮಾರಿಗೆ ಮನೆಯಲ್ಲಿದ್ದವರು ನಿದ್ದೆಯಲ್ಲಿದ್ದಾಗ, ಒಂದು ಕೈಯಲ್ಲಿ ಕಸದ ಬಕೆಟ್ ಹಾಗೂ ಮತ್ತೊಂದು ಕೈಯಲ್ಲಿ ಬಟ್ಟೆ ಬರೆಗಳಿದ್ದ ಬ್ಯಾಗ್ ಹಿಡಿದುಕೊಂಡು ಈಕೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ ಎಂದು ಪತಿ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಸಿಸಿಟಿವಿಯಲ್ಲಿ ಬಣ್ಣ ಬಯಲು:
ಮಹಿಳೆಯು ಬ್ಯಾಗ್ ಹಿಡಿದು ಸದ್ದಿಲ್ಲದೆ ಹೋಗುತ್ತಿರುವ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಇತ್ತ ಪತ್ನಿ ಕಾಣದೆ ಕಂಗಾಲಾದ ಶರತ್, ಹುಡುಕಾಟ ನಡೆಸಿ ಕೊನೆಗೆ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಈ ಕಿಲಾಡಿ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಬಲೆ ಬೀಸಿದ್ದಾರೆ.









Comments
Leave a Comment