ನೈರುತ್ಯ ರೈಲ್ವೆಯಲ್ಲಿ ಕನ್ನಡಕ್ಕೆ ಎಳ್ಳುನೀರು: ಕೇಂದ್ರ ಸರ್ಕಾರದ ‘ಹಿಂದಿ ಹೇರಿಕೆ’ಗೆ ಕನ್ನಡಿಗರ ಆಕ್ರೋಶ

India:

Font size:

ಪಾದ್ರೇಶಿಕ ಭಾಷೆಗಳ ಕಡೆಗಣನೆ: ರೈಲ್ವೆ ಮಂಡಳಿಯ ದ್ವಂದ್ವ ನೀತಿಯಿಂದ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ

ಕರ್ನಾಟಕದ ಮಣ್ಣಿನಲ್ಲಿ ನೆಲೆಯೂರಿರುವ ನೈರುತ್ಯ ರೈಲ್ವೆಯಲ್ಲಿ ಸ್ಥಳೀಯ ಭಾಷೆ ಕನ್ನಡವನ್ನು ವ್ಯವಸ್ಥಿತವಾಗಿ ಹೂತುಹಾಕುವ ಪಿತೂರಿ ನಡೆಯುತ್ತಿದೆಯೇ? ಇಂತಹದೊಂದು ಪ್ರಶ್ನೆ ಈಗ ಪ್ರತಿಯೊಬ್ಬ ಕನ್ನಡಿಗನನ್ನೂ ಕಾಡತೊಡಗಿದೆ. ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಯ ಮೂಲಕ ‘ಹಿಂದಿ ಹೇರಿಕೆ’ಯನ್ನು ಪರೋಕ್ಷವಾಗಿ ಹೇರುತ್ತಿದ್ದು, ಕನ್ನಡಿಗ ಅಭ್ಯರ್ಥಿಗಳ ವೃತ್ತಿ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ.

ಏನಿದು ವಿವಾದ?

ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಇತ್ತೀಚೆಗೆ 73 ಗೂಡ್ಸ್ ರೈಲು ನಿರ್ವಾಹಕರ (Goods Train Manager) ಹುದ್ದೆಗಳ ಭರ್ತಿಗಾಗಿ ಆಂತರಿಕ ಪದೋನ್ನತಿ ಪರೀಕ್ಷೆ (LDC Quota) ನಡೆಸಲಾಗಿತ್ತು. ಈ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗುವುದು ಎಂದು ಈ ಹಿಂದೆ ಭರವಸೆ ನೀಡಲಾಗಿತ್ತು. ಆದರೆ, ವಾಸ್ತವದಲ್ಲಿ ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳಿಗೆ ನೀಡಿದ್ದು ಕೇವಲ ಹಿಂದಿ ಮತ್ತು ಇಂಗ್ಲಿಷ್ ಪ್ರಶ್ನೆಪತ್ರಿಕೆಗಳನ್ನು ಮಾತ್ರ! ಇದರಿಂದ ನೂರಾರು ಕನ್ನಡಿಗ ಸಿಬ್ಬಂದಿಗಳು ಪರೀಕ್ಷೆ ಬರೆಯಲಾಗದೆ ಕಣ್ಣೀರು ಹಾಕುವಂತಾಗಿದೆ.

ಸಚಿವರ ಆದೇಶಕ್ಕೂ ಬೆಲೆಯಿಲ್ಲದಂತಾಯಿತೇ?

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಹಿಂದೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, "ಕರ್ನಾಟಕದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲೇಬೇಕು" ಎಂದು ಖಡಕ್ ಸೂಚನೆ ನೀಡಿದ್ದರು. ಆದರೆ, ರೈಲ್ವೆ ಮಂಡಳಿಯ ಉನ್ನತ ಅಧಿಕಾರಿಗಳು ಸಚಿವರ ಮಾತನ್ನೂ ಧಿಕ್ಕರಿಸಿ, "ಮಂಡಳಿಯ ನಿಯಮದ ಪ್ರಕಾರ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಅವಕಾಶ" ಎಂದು ಹಠ ಹಿಡಿದು ಕುಳಿತಿದ್ದಾರೆ. ಇದು ಕೇಂದ್ರ ಸರ್ಕಾರದ ಆಡಳಿತ ಯಂತ್ರದಲ್ಲಿ ರಾಜ್ಯದ ಪ್ರತಿನಿಧಿಗಳಿಗೆ ಇರುವ ಬೆಲೆ ಎಷ್ಟು ಎಂಬುದನ್ನು ಪ್ರಶ್ನಿಸುವಂತೆ ಮಾಡಿದೆ.

ನೆರೆಯ ಗುಂತಕಲ್‌ನಲ್ಲಿ ತೆಲುಗಿಗೆ ಜೈ, ಬೆಂಗಳೂರಿನಲ್ಲಿ ಕನ್ನಡಕ್ಕೆ ವೈ?

ಕೇಂದ್ರ ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ ಎಂಬಂತೆ, ನೈರುತ್ಯ ರೈಲ್ವೆಯ ವ್ಯಾಪ್ತಿಗೇ ಬರುವ ಆಂಧ್ರಪ್ರದೇಶದ ಗುಂತಕಲ್ ವಿಭಾಗದಲ್ಲಿ ಇತ್ತೀಚೆಗೆ ನಡೆದ ಪರೀಕ್ಷೆಗಳಲ್ಲಿ ತೆಲುಗು ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪಕ್ಕದ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಗೆ ಮನ್ನಣೆ ನೀಡುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಬಂದಾಗ ಮಾತ್ರ 'ನಿಯಮ'ಗಳ ಜಪ ಮಾಡುವುದು ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವ ತಂತ್ರವಲ್ಲವೇ ಎಂಬ ಆಕ್ರೋಶ ವ್ಯಕ್ತವಾಗಿದೆ.

ರೈಲ್ವೆ ಇಲಾಖೆಯಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು!

ನೈರುತ್ಯ ರೈಲ್ವೆಯಲ್ಲಿ ಈಗಾಗಲೇ ಶೇ. 95ಕ್ಕಿಂತ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅನ್ಯರಾಜ್ಯದವರೇ ತುಂಬಿಕೊಂಡಿದ್ದಾರೆ. ಈಗ ಆಂತರಿಕ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಅವಕಾಶ ನಿರಾಕರಿಸುವ ಮೂಲಕ, ಕೆಳಹಂತದಲ್ಲಿರುವ ಅಲ್ಪಸ್ವಲ್ಪ ಕನ್ನಡಿಗರಿಗೂ ಬಡ್ತಿ ಸಿಗದಂತೆ ಮಾಡಿ, ಇಡೀ ಇಲಾಖೆಯನ್ನು 'ಕನ್ನಡ ಮುಕ್ತ' ಮಾಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದಂತಿದೆ. ರೈಲ್ವೆ ಸ್ಟೇಷನ್ ಮಾಸ್ಟರ್, ಟ್ರೈನ್ ಕ್ಲರ್ಕ್, ಶಂಟಿಂಗ್ ಮಾಸ್ಟರ್‌ನಂತಹ ಹುದ್ದೆಗಳಿಗೆ ಕನ್ನಡಿಗರು ಬರದಂತೆ ತಡೆಯಲಾಗುತ್ತಿದೆ.

ಕನ್ನಡ ಸಂಘಟನೆಗಳ ಎಚ್ಚರಿಕೆ: ರೈಲ್ವೆ ಮುತ್ತಿಗೆಗೆ ಸಜ್ಜು

ಈ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡ ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. "ನಮ್ಮ ನೆಲದ ರೈಲ್ವೆ ಹಳಿಗಳ ಮೇಲೆ ರೈಲು ಓಡಿಸಬೇಕು, ಆದರೆ ನಮ್ಮ ಭಾಷೆಗೆ ಬೆಲೆ ಕೊಡಬಾರದು ಎಂದರೆ ಹೇಗೆ? ಕೂಡಲೇ ಈ ಅಕ್ರಮ ಪರೀಕ್ಷಾ ಫಲಿತಾಂಶವನ್ನು ರದ್ದುಗೊಳಿಸಬೇಕು. ಕನ್ನಡದಲ್ಲಿ ಮರು ಪರೀಕ್ಷೆ ನಡೆಸದಿದ್ದರೆ ನೈರುತ್ಯ ರೈಲ್ವೆಯ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು" ಎಂದು ಅವರು ಗುಡುಗಿದ್ದಾರೆ.

ಅಧಿಕಾರಿಗಳ ಹಾರಿಕೆ ಉತ್ತರ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, "ರೈಲ್ವೆ ಮಂಡಳಿಯ ಸದ್ಯದ ಆದೇಶದಂತೆ ನಮಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ಅನುಮತಿ ಇದೆ" ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

​ಕೇಂದ್ರ ಸರ್ಕಾರವು ಈ ಕೂಡಲೇ ಮಧ್ಯಪ್ರವೇಶಿಸಿ, 1992ರ ರೈಲ್ವೆ ಮಂಡಳಿಯ ಮೂಲ ಆದೇಶದಂತೆ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡದಿದ್ದರೆ, ಕರ್ನಾಟಕದಲ್ಲಿ ರೈಲ್ವೆ ಇಲಾಖೆ ವಿರುದ್ಧದ ಹೋರಾಟದ ಕಿಚ್ಚು ಹತ್ತಿಕೊಳ್ಳುವುದು ನಿಶ್ಚಿತ.

Comments

Leave a Comment

Prev Post ವಿಧಿಯ ಅಟ್ಟಹಾಸಕ್ಕೆ ಒಂದೇ ಚಿತೆಯಾದವು 9 ಜೀವಗಳು: ದೇವರ ದರ್ಶನ ಮುಗಿಸಿ ಬರುವಷ್ಟರಲ್ಲಿ ಹೆದ್ದಾರಿಯೇ ಸ್ಮಶಾನ!
Next Post ಅರಸೀಕೆರೆ ಪೊಲೀಸರ ಬಲೆಗೆ ಬಿದ್ದ ಖದೀಮರು: 16 ಬೈಕ್‌ಗಳ ಸಮೇತ ಮೂವರು ಅಂತರಜಿಲ್ಲಾ ಕಳ್ಳರ ಬಂಧನ