ಗಾಯಾಳು ತಾಯಿಯ ರಕ್ತ ಕಂಡು ರೊಚ್ಚಿಗೆದ್ದ ಮಗ: ದೊಣ್ಣೆ-ಗುದ್ದಲಿಯಿಂದಲೇ ಮೃತ್ಯು ದರ್ಶನ ಮಾಡಿಸಿದ ಕುಮಾರ್ ಅಂಡ್ ಟೀಮ್
ಕುಣಿಗಲ್ : ಕುಡಿದ ಮತ್ತಿನಲ್ಲಿ ಮನುಷ್ಯ ಮೃಗವಾಗ್ತಾನೆ ಅನ್ನೋದಕ್ಕೆ ಕುಣಿಗಲ್ ತಾಲ್ಲೂಕಿನ ಸಂತೆಮಾವತ್ತೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕ್ಷುಲ್ಲಕ ಕಾರಣಕ್ಕೆ ತನ್ನದೇ ಚಿಕ್ಕಮ್ಮ ಕಾಳಮ್ಮಳ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಮಂಜುನಾಥ್ ಎಂಬ ಪಾಪಿ, ಈಗ ಅದೇ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದಾನೆ. ಮದ್ಯದ ಅಮಲಿನಲ್ಲಿ ವಿವೇಚನೆ ಕಳೆದುಕೊಂಡಿದ್ದ ಮಂಜುನಾಥ್, ಮನೆಯಲ್ಲಿದ್ದ ಗುದ್ದಲಿ ಮತ್ತು ದೊಣ್ಣೆಗಳನ್ನು ಹಿಡಿದು ಕಾಳಮ್ಮಳ ಮೇಲೆ ರಾಕ್ಷಸನಂತೆ ಎರಗಿದ್ದ. ತೀವ್ರ ರಕ್ತಸ್ರಾವವಾಗಿ ಕಾಳಮ್ಮ ಸಾವು-ಬದುಕಿನ ನಡುವೆ ಹೋರಾಡುತ್ತಾ ಕುಣಿಗಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಇತ್ತ ಊರಿನಲ್ಲಿ ಸೇಡಿನ ಕಿಚ್ಚು ಹೊತ್ತಿ ಉರಿದಿದೆ.
ತನ್ನ ತಾಯಿಯ ಮೇಲೆ ನಡೆದ ಈ ಭೀಕರ ಹಲ್ಲೆಯನ್ನು ಕಂಡು ಮಗ ಕುಮಾರ್ ಮತ್ತು ಆತನ ಸಂಬಂಧಿಕರಾದ ಉಮೇಶ್ ಹಾಗೂ ರಂಗಸ್ವಾಮಿ ರೊಚ್ಚಿಗೆದ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಮುಖ ಕಣ್ಣ ಮುಂದೆ ಬರುತ್ತಿದ್ದಂತೆ, ಮಂಜುನಾಥನ ಅಟ್ಟಹಾಸಕ್ಕೆ ಅಂತ್ಯ ಹಾಡಲೇಬೇಕೆಂದು ನಿರ್ಧರಿಸಿದ ಈ ಮೂವರು ಆತನ ಮೇಲೆ ದಾಳಿ ಮಾಡಿದ್ದಾರೆ. ಯಾವ ಗುದ್ದಲಿ-ದೊಣ್ಣೆಗಳಿಂದ ಮಂಜುನಾಥ ಚಿಕ್ಕಮ್ಮನನ್ನ ಸಾಯಿಸಲು ಹೋಗಿದ್ದನೋ, ಅದೇ ಆಯುಧಗಳು ಈಗ ಆತನ ಪ್ರಾಣಪಕ್ಷಿ ಹಾರಿಸಿವೆ. ದೊಣ್ಣೆಗಳ ಏಟಿಗೆ ನಲುಗಿ, ಗುದ್ದಲಿಯ ಹೊಡೆತಕ್ಕೆ ನುಚ್ಚುನೂರಾದ ಮಂಜುನಾಥ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ. ಮಗನೇ ತಾಯಿಯ ಮೇಲಿನ ಹಲ್ಲೆಗೆ ಪ್ರತಿಯಾಗಿ ಕೊಲೆ ಮಾಡಿರುವ ಈ ಸುದ್ದಿ ಜಿಲ್ಲಾದ್ಯಂತ ಸಂಚಲನ ಮೂಡಿಸಿದೆ. ಮೃತ ಮಂಜುನಾಥನ ತಂದೆ ಚಿಕ್ಕರಂಗಯ್ಯ ದೂರಿನ ಮೇರೆಗೆ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು, ಸದ್ಯ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಅತಿಯಾದ ಕುಡಿತ ಮತ್ತು ಕ್ಷಣಿಕ ಸಿಟ್ಟು ಒಂದು ಕುಟುಂಬವನ್ನು ಸ್ಮಶಾನವಾಗಿಸಿದೆ.









Comments
Leave a Comment